Monday, January 18, 2010

ರಾಮಾಚಾರಿ! ... ಮೇಷ್ಟ್ರೇ! ..

"ಮೇಷ್ಟ್ರೇ! ... ರಾಮಾಚಾರಿ! ... ಮೇಷ್ಟ್ರೇ! ... ರಾಮಾಚಾರಿ!... "

ಕನ್ನಡ ಫಿಲಂ ಅಂದಾಕ್ಷಣ ನನ್ನ ತಲೆಯಲ್ಲಿ ಸುಳಿಯುವುದು ನಾಗರಹಾವಿನ ಈ ಡೈಲಾಗ್ !
ರಾಮಾಚಾರಿ ಮತ್ತು ಚಾಮಯ್ಯ ಮೇಷ್ಟ್ರು ಕಮರಿಯಲ್ಲಿ ಬಿದ್ದು ಅಸ್ತಂಗತರಾಗುವ ... ಎಂತವರಿಗಾದರೂ ಗಂಟಲು ಕಟ್ಟಿ ಬರುವಂತ ಸನ್ನಿವೇಶ...

ನಾನು ಕನ್ನಡ ಫಿಲಂ ಗಳನ್ನು ನೋಡಿರುವುದು ಕಡಿಮೆಯೇ!
ತಲೆ ಕೆಡಿಸಿ ನೆನಪಿಸಿಕೊಂಡರೂ ಲೆಕ್ಕ ಸಿಗುವುದು ಅಬ್ಬಬ್ಬಾ ಅಂದರೆ ಒಂದಿಪ್ಪತ್ತು ಒಳ್ಳೆಯ ಸಿನಿಮಾಗಳು.
ನಮ್ಮ ಜನಕ್ಕೆ ಗುಂಡಾಗಳನ್ನು ಫಿಲಂ ನಲ್ಲಿ ನೋಡುವುದಂದರೆ ಖುಷಿ ..
ಅದರಲ್ಲೂ ಆತ ನಮ್ಮ ತರಹದ ಮಿಡ್ಲ್ ಕ್ಲಾಸ್ ಪರಿಸರದಲ್ಲಿದ್ದು harmless ಮತ್ತು ಒಳ್ಳೆಯ ಗುಂಡನಾದರೆ ಆ ಫಿಲಂ ಹಿಟ್ ಗ್ಯಾರಂಟಿ ..
ಹಿಂದಿಯ ಮುನ್ನಾಭಾಯಿ ಕೂಡ ಇಂತಹುದೇ ಒಂದು ಪ್ರೀತಿಯ ಗುಂಡ...

ಹಾಗೆಯೇ ನಮ್ಮ ಕನ್ನಡದ ರಾಮಾಚಾರಿ. ಅವನ ಚಿಗುರು ಮೀಸೆ, ಓಡ್ದತನ, ಸುಕ್ಕು ಸುಕ್ಕಾದ ಪೈಜಾಮ, ಮೊಂಡತನ, ಕೇಳಿದ್ದನ್ನೆಲ್ಲಾ ನಂಬಿ ಬಿಡುವ ಮುಗ್ದತೆ, ಪರೀಕ್ಷೆಯಲ್ಲಿ ಕಾಪಿ ಹೊಡೆಯುವ creative ಪ್ರಯತ್ನ, ಪ್ರಿನ್ಸಿಪಾಲರ ಲಿಗೆ ಅರೆ ನಗ್ನ ಸೇವೆ, ನಾಗರ ಹಾವನ್ನೇ ಆದರ್ಶ ಮಾಡಿಕೊಳ್ಳುವ ಕೋಪ... ... ... ಇನ್ನೂ ಏನೇನೋ..
ನಮ್ಮ ರಾಮಾಚಾರಿ ಒಬ್ಬ in-house rebel..

ಅದೇ ಚಾಮಯ್ಯ ಮೇಷ್ಟ್ರು .. ಸಭ್ಯ ಹೃದಯವಂತ, ಪ್ರೀತಿ ವಾತ್ಸ್ಯಲ್ಲದ ಚಿಲುಮೆ, ರಾಮಾಚಾರಿ ಗುಂಡನ ಒಳಗಿನ ಒಳ್ಳೆತನದ ಮೇಲೆ ನಂಬಿಕೆಯಿರುವಂತಹ ವ್ಯಕ್ತಿ.. ಅವನನ್ನು ಹೇಗಾದರೂ ಮಾಡಿ ದಾರಿಗೆ ತಂದು ಒಬ್ಬ ದೊಡ್ಡ ಮನುಷ್ಯನನ್ನಾಗಿ ಮಾಡಬೇಕೆಂಬ ಆಸೆ...

ಈ ಚಿತ್ರವನ್ನು ಸುಮಾರು ಒಂದು ಹತ್ತು ಬಾರಿಯಾದರೂ ನಾನು ನೋಡಿರಬಹುದು.. ನೋಡಿದಾಗಲೆಲ್ಲ 'ಆಹಾ ಎಂತಹ ಜೋಡಿ, ಮೇಷ್ಟ್ರು , ರಾಮಾಚಾರಿ' ಎನ್ನಿಸುತ್ತಿತ್ತು.
ಯಾವಾಗಲೊಮ್ಮೆ ನಾಗರಹಾವಿನ ಎರಡನೇ ಭಾಗ ಇದ್ದರೆ ನೋಡಬೇಕು, ಇಲ್ಲವಾದರೆ ತೆಗೆಯಬೇಕು ಎಂಬ ಆಸೆಯಾಗುತ್ತಿತ್ತು..

ಸದ್ಯಕ್ಕಂತೂ... ಈ ಆಸೆ ಆಸೆ ಯಾಗಿಯೇ ಉಳಿಯಲಿದೆ..
ಡಿಸೆಂಬರ್ ೩೦ ರಂದು ವಿಷ್ಣುವರ್ಧನ್ ಹೋದದ್ದಷ್ಟೇ.. ನಾಗರಹಾವು ಫಿಲಂ climax ನಂತೆ .. ಇಂದು ಅಶ್ವಥ್ ರವರೂ ತಮ್ಮ ಶಿಷ್ಯನ ಬಳಿಗೆ ಹೋಗಿಬಿಟ್ಟರು...

ಎಲ್ಲೋ ಹೃದಯದಾಳದಲ್ಲಿ "ಮೇಷ್ಟ್ರೇ! ... ರಾಮಾಚಾರಿ! ... ಮೇಷ್ಟ್ರೇ! ... ರಾಮಾಚಾರಿ!... " ಇನ್ನೂ ಕೇಳುತ್ತಾ ಇದೆ -
ಆದರೆ ಆ ದೃಶ್ಯ ಮುಂದಕ್ಕೆ ಹೋಗುತ್ತಲೇ ಇಲ್ಲ..
ಮನಸ್ಸಿಗೆ climax ಮುಗಿಸಲು ಇಷ್ಟವೇ ಇಲ್ಲ.... ....
ಹೀಗೆ ಯಾಕೋ.. ಕಣ್ಣು ಕೂಡ ಈ ವಿಚಿತ್ರ ಭಾವನೆಯನ್ನು ತಡೆ ಹಿಡಿಯಲಾಗದೆ.. ಹನಿಯನ್ನು ಹಾಕುತ್ತಿದೆ ..


"ಮೇಷ್ಟ್ರೇ! ... ರಾಮಾಚಾರಿ! ... ಮೇಷ್ಟ್ರೇ! ... ರಾಮಾಚಾರಿ!... .................................................................

Sunday, September 23, 2007

What money can't buy...

Movie Ticket Rs. 170, Auto towards the Multiplex: Rs. 70, Sandwich at interval: Rs.45. Chocolate Pastry: Rs. 40, Ice Cream- Small Scoop: Rs. 65, Rice at Wangs Kitchen: Rs. 65, Coke: Rs. 45, Auto Back home: Rs. 120.
Total: Rs. 620 for an ordinary movie trip!
Whatsoever happened to the movies that I was watching with loads of fun with 20 bucks in my pocket?
The question is not whether I can afford it.The question is whether I was happy after it.
· I could have spent money on balloons for street kids, played with them on the beach.
· I could have given this to WWF and participated with them for an awareness/conservation of turtles at Kottivakkam beach.
· I could have bought a good book; I would have cherished reading it for at least a week.
· I could have taken a girl out for dinner at the beach restaurant and make her feel special. I would have felt good that I made somebody’s day.

Well, there are so many things that I could have done with six hundred bucks rather than going to this fateful movie. I hated it.
· I hated the story.
· I hated that women in the movie were made sexy and flashy and expose unnecessarily. Sensuality is ugly when there is no artistic sensibility.
· I hated sandwich because it was cold, mayonnaise had turned sour and it was tasteless.
· I hated to pay 45 bucks for a coke which is otherwise 10 bucks
· I hated the ugly and showy make up of girls at the mall.

There are so many things that money can’t buy – We better should realize it sooner than later.
Thankful for this experience, now I know, I need not be a billionaire to have some jolly good time in life.

Saturday, September 22, 2007

ಸುಬ್ಬಣ್ಣಾ೦ಕ್ಲ್ - ಒಂದು ನೆನಪು...

"ಅವನ್ಯಾರೋ ನಮಗಿ೦ತ ತಲೆ ಕೆಟ್ಟ ಆಸಾಮೀನೇ ಇರಬೇಕು!"
ಮೊದಲ ಬಾರಿ ಡಾಕ್ಟರ್ ಮೀನಗು೦ಡಿ ಸುಬ್ರಮಣ್ಯ೦ ಅಥವಾ ನನ್ನ ಸುಬ್ಬಣ್ಣಾ೦ಕ್ಲ್, ಬಗ್ಗೆ ನಾನು ಕೇಳಿದುದು ಹೀಗೆ.
ಆಗ ನಾನಿನ್ನೂ ಪ್ರಾಥಮಿಕ ಶಾಲೆಯಲ್ಲಿದ್ದೆ.

ಹೀಗೆ ಹೇಳಿದ ನನ್ನ ತ೦ದೆಗೆ ಕೇಳಿದೆ, "ಅಣ್ಣ, ಯಾರದು ? "
ಅವರು ವಿವರಿಸಿದರು,
"ತೆರಕಣಾ೦ಬಿಯ ಬಳಿ, ನಾನು ನಿನ್ನ ಚಿಕ್ಕಪ್ಪ ಟೀ ಕುಡಿಯಲು ಹೋಟೆಲಿಗೆ ಹೋಗಿದ್ದೆವು, ಆಗ, ನಿನ್ನ ಚಿಕ್ಕಪ್ಪ ನೀರಿನ ಬದಲು ಎಳೆ ನೀರಿನಿ೦ದ ಟೀ ಮಾಡಿದರೆ ಹೇಗಿರುತ್ತದೆ ಅ೦ಥ ತಮಾಷೆ ಮಾಡಿದರು, ನಾನು ನಕ್ಕೆ. ಅಷ್ಟರಲ್ಲೆ ನನ್ನ ಪಕ್ಕದಲ್ಲಿ ಕುಳಿತಿದ್ದ ಆಸಾಮಿಯೊಬ್ಬ ಎದ್ದು ಬ೦ದು, ನಾನು ಒಮ್ಮೆ ಟ್ರಯ್ ಮಾಡಿದ್ದೆ ಆದರೆ ನೀರಿನಷ್ಟು ಚೆನ್ನಾಗಿ ಇರ್ಲಿಲ್ಲ ಅ೦ಥ ಅ೦ದು ಎದ್ದೋದ" ಎ೦ದೇಳಿ ನಕ್ಕರು.

ಅದಾಗಿ ಬಹಳ ವರ್ಷಗಳೇ ಕಳೆದಿರಬೇಕು, ಸುಬ್ಬಣ್ಣಾ೦ಕ್ಲ್ ವ್ಯಕ್ತಿತ್ವ ಸ೦ವಾದ ಅಥವಾ ಟ್ರಾನ್ಸಾಕ್ಷನಲ್ ಅನಾಲಿಸಿಸ್ (ಟಿಎ) ಅನ್ನು ಅಭ್ಯಸಿಸುತ್ತಿದ್ದರು. ನನ್ನ ತ೦ದೆ ಮತ್ತು ನಮ್ಮ ಚಿಕ್ಕಪ್ಪ ಯಥಾ ರೀತಿ ಇ೦ಥ ಸೈಕೊಲೊಜಿ ಸ೦ಭ೦ದದ ಎಲ್ಲಾ ಶಾಸ್ತ್ರಗಳ ಬಗ್ಗೆ ಅಗಾಧ ಆಸಕ್ತಿಯನ್ನುಳವರಾಗಿದ್ದರು. ತ೦ದೆಯ೦ತೂ ಕೊಚಿ ಯಲ್ಲಿ ಒ೦ದು ತಿ೦ಗಳು ಟಿಎ ಟ್ರೈನಿ೦ಗ್ ಅನ್ನು ಅಟೆ೦ಡ್ ಮಾಡಿ ಬ೦ದಿದ್ದರು. ಮೈಸೂರಿನಲ್ಲಿ ಸುಬ್ಬಣ್ಣಾ ಅ೦ಥ ಯಾರೋ ಟಿಎ ಬಗ್ಗೆ ಸೆಮಿನಾರ್ ಮಾಡುತ್ತಾರೆ ಎ೦ದು ಕಿವಿಗೆ ಬಿದ್ದೊಡನೆ, ತ೦ದೆ ನನ್ನನ್ನೂ, ಅಮ್ಮನನ್ನೂ ಕರೆದುಕೊ೦ಡು ಮೈಸೂರಿಗೆ ಹೊರಟೇ ಬಿಟ್ಟರು.

ಅವರನ್ನು ಮೊದಲ ಬಾರಿ ನೋಡಿದುದು ಆಗ, ಅವರನ್ನು ನೋಡಿದ ತಕ್ಷಣ ನನಗೆ ನೆನಪಾದದ್ದು ಗಡ್ಡ ಮೀಸೆ ಇಲ್ಲದ ಸಾ೦ತಾ ಕ್ಲಾಸ್. ಇಡೀ ಸೆಮಿನಾರಿನಲ್ಲಿ ನಾನೇ ಚಿಕ್ಕವನು. ಎಲ್ಲಾದರಲ್ಲೂ ಡಿಸ್ಕೌ೦ಟು, ಎಲ್ಲಾದಿಕ್ಕೂ ಪ್ರೋತ್ಸಾಹ, ಒ೦ದೇ ಘ೦ಟೆಯಲ್ಲಿ, ಸುಬ್ಬಣ್ಣಾ೦ಕ್ಲ್ ನನ್ನ ಅಚ್ಚುಮೆಚ್ಚಿನ ಅ೦ಕ್ಲ್ ಆಗಿಬಿಟ್ಟರು. ನಾನು ಚಿಕ್ಕವನಾದರು, ಅವರು ಹೇಳುತ್ತಿದ್ದ ಪೇರೆ೦ಟ್ - ಅಡಲ್ಟ್- ಚೈಲ್ದ್ ಎಗೊ ಸ್ಟೇಟ್ ಗಳು ಮತ್ತಿನಿತರ ಟಿಎ ಯ ಮೂಲಭೂತ ಅ೦ಶಗಳು ಚೆನ್ನಾಗಿ ಅರ್ಥವಾದವು. ಪ್ರಾಯಶಃ ಅದು ನನ್ನ ಜೀವನದ ಪ್ರಥಮ "*ಪೆರ್ಸನಾಲಿಟಿ ಏಫ಼್ಫ಼ೆಕ್ಟಿವ್‍ನೆಸ್" ಟ್ರೈನಿ೦ಗ್ ಇರಬೇಕು.

ಟ್ರೈನಿ೦ಗ್ ಆದ ಮೇಲೆ, ನಾನೂ ಉದ್ಗರಿಸಿದ್ದೆ "ಸುಬ್ಬಣ್ಣಾ೦ಕ್ಲ್, ಪೂರ್ತಿ ನ್ಯಾಚುರಲ್ ಚೈಲ್ದು!!"
ತ೦ದೆಯ೦ತೂ ಖುಷಿಯಾದರು, ಕನಿಷ್ಠ ಮಗನಿಗೆ ಸೆಮಿನಾರಿನಲ್ಲಿ ನಡೆದ ಕೆಲವು ವಿಷಯಗಳಾದರೂ ಮನದಟ್ಟಾಗಿದೆ ಅ೦ಥ.
ನ೦ತರ, ಅವರನ್ನು ಬೇಟಿಯಾಗುತಿದ್ದ ನನ್ನ ಚಿಕ್ಕಪ್ಪ, ತ೦ದೆ ಹಾಗೂ ಚಿಕ್ಕಮ್ಮನಿ೦ದ ಅವರ ವಿಷಯ ತಿಳಿಯುತ್ತಿತ್ತೆ ವಿನಹ, ಅವರನ್ನು ಬೇಟಿ ಮಾಡುವ ಸನ್ನಿವೇಷ ಬ೦ದಿರಲಿಲ್ಲ.
ಆದರೆ ದೇವರ ದಯೆಯಿ೦ದ ಇ೦ಜಿನಿಯರಿ೦ಗ್ ಪರೀಕ್ಷೆಯಲ್ಲಿ ಫೇಲಾದಾಗ ತ೦ದೆ "ನೀನು ಫೇಲಾಗುವ ಹುಡುಗನಲ್ಲವೇ ಅಲ್ಲ. ನೀನು ಇಲ್ಲಿಯವರೆವಿಗೂ ಎಲ್ಲದರಲ್ಲೂ ಒಳ್ಳೆಯ ಅ೦ಕ ತೆಗೆಯುತ್ತಿದ್ದ ನೀನು ಫೇಲೇಕಾದೆ ಎ೦ಬುದು ನನಗೆ ಅರ್ಥವಾಗುತ್ತಿಲ್ಲ. ನನ್ನ ಬಳಿ ಡಿಸ್ಕಸ್ ಮಾಡಲಾರದ೦ತ ಸಮಸ್ಯೆಗಳೇನಾದರೂ ಇದ್ದರೆ ಸುಬ್ಬಣ್ಣ ಸೈಕೊಲೊಜಿ ಕೌನ್ಸೆಲಿ೦ಗ್ ಮಾಡುತ್ತಾರೆ ಅವರ ಬಳಿ ಹೋಗಿ ಬಾ" ಅ೦ದರು.
ನಾನು ಫೇಲಾದುದಕ್ಕೆ ಒ೦ದು ಸುಲಭದ ಕಾರಣವಿತ್ತು. ನಾನು ಎಗ್ಸಾಮಿಗೆ ಓದಿರಲ್ಲಿಲ್ಲ. ಇ೦ಟೆರ್ ನೆಟ್ ನಲ್ಲಿ ನನ್ನದೇ ವೆಬ್ ಸೈಟ್ ತೆರೆದಿದ್ದೆ, ಅದರ ಮೂಲಕವೇ ಹಣ ಮಾಡುವ ಹ೦ಚಿಕೆಯಾಕುತ್ತಿದ್ದೆ. ಆ ವೆಬ್ ಸೈಟ್ ತೆರೆಯಲು ಪಟ್ಟ ೫ ಪ್ರತಿಶತ ಶ್ರಮವನ್ನೂ ಕೂಡ ನನ್ನ ಇ೦ಜಿನಿಯರಿ೦ಗ್ ಓದಲು ಬಳಸಿರಲಿಲ್ಲ. ಆದರೂ ಮನೆಯಲ್ಲಿ ತ೦ದೆಯ ಲೆಕ್ಚರ್ ಕೇಳಿ ಕೇಳಿ ತಲೆ ಕೆಟ್ಟಿದ್ದ ನಾನು ಸುಬ್ಬಣ್ಣಾ೦ಕ್ಲ್ ಜೊತೆ ಕುಳಿತು 'ಕೌನ್ಸಿಲಿ೦ಗ್' ಮಾಡಿಸಿಕೊಳ್ಳಲು ತಯ್ಯಾರಾದೆ.
ಈಗಾಗಲೆ ಸುಬ್ಬಣ್ಣಾ೦ಕ್ಲ್ ಬರೆದ ಪುಸ್ತಕಗಳನ್ನೋದಿದ್ದ ನನಗೆ, ಅವರನ್ನು ಬೇಟಿ ಮಾಡುವ ಕುತೂಹಲವೂ ಇತ್ತು. ನನ್ನ ಕಸಿನ್ ಮುಖೇಶ ಅವರ ಬಳಿ ರೆಗ್ಯುಲರ್ ಆಗಿ ಕೌನ್ಸೆಲಿ೦ಗ್ ಗೆ ಹೊಗುತ್ತಿದ್ದ. ಅವನೂ ಕೂಡ ನನ್ನ ತರಹ ಫೇಲಾಗಿ ಸುಬ್ಬಣ್ಣಾ೦ಕ್ಲ್ ಬಳಿ ಮೊದಲ ಬಾರಿಗೆ ಹೋಗಿದ್ದ. ಅವನ ಬಳಿ ಸಲಹೆ ಕೇಳಿ ಸುಬ್ಬಣ್ಣಾ೦ಕ್ಲ್ ಬಳಿ ಒ೦ದು ಅಪಾಯಿ೦ಟ್ ಮೆ೦ಟ್ ತೆಗೆದುಕೊ೦ಡಿದ್ದೂ ಆಯಿತು.
ಮೊದಲ ಬೇಟಿಯಲ್ಲಿ ಸುಬ್ಬಣ್ಣಾ೦ಕ್ಲ್ ಕೇಳಿದರು "ಹೇ ಚೇತಕ್ ಹೇಗಿದ್ದೀಯ?"
"ಫಸ್ಟ್ ಕ್ಲಾಸಾಗಿದ್ದೇನೆ ಅ೦ಕಲ್!"
"ದಟ್ ಈಸ್ ಗುಡ್! ಈಗ ನನ್ನ ಬಳಿಗೆ ಬ೦ದ ಕಾರಣ?"
"ಆ.. ಉಹು೦.. ನಾನು ಇ೦ಜಿನಿಯರಿ೦ಗ್ ಎಗ್ಸಾಮಿನಲ್ಲಿ ಫೇಲಾಗಿದ್ದೇನೆ!"
"ಹಮ್!"
"ಅದುಕ್ಕೆ ನಿಮ್ಮ ಬಳಿ ಕೌನ್ಸಲಿ೦ಗ್ ಮಾಡಿಸಿಕೊಳ್ಳೋಣ ಅ೦ಥ ಬ೦ದಿದ್ದೇನೆ.."
ಸುಬ್ಬಣ್ಣಾ೦ಕ್ಲ್ ರೇಗಿ ಹೋದರು ಅ೦ಥ ಕಾಣುತ್ತದೆ. ಒ೦ದು ಕ್ಷಣ ಸುಮ್ಮನಿದ್ದ ಅವರು ನ೦ತರ,
" ಉಹು೦! ನಾನು ಹೇಳಿಕೇಳಿ ಮೆಡಿಕಲ್ ಓದಿದ್ದೇನೆ, ಅದೂ ಹೊಮಿಯೊಪತಿ. ನಿನ್ನ ಇ೦ಜಿನಿಯರಿ೦ಗ್ ಪರೀಕ್ಷೆ ಬರೆದಿದ್ದರೆ ನಾನೂ ಫೇಲೇ! ನೀನು ಇನ್ಯಾರಾದರೂ ಇ೦ಜಿನಿಯರಿ೦ಗ್ ಪ್ರೊಫ಼ೆಸರ್ ಬಳಿ ಸಹಾಯ ಪಡೆಯುವುದೇ ಒಳಿತು" ಎ೦ದು ಬಿಟ್ಟರು!
ನನಗೆ ತಲೆ ಕೆಟ್ಟ೦ತಾಯಿತು. ಅವರ ಪುಸ್ತಕದಲ್ಲಿ ಅವರು ಈ ತರಹದ ಉತ್ತರಗಳನ್ನು ಕೊಟ್ಟಿದ್ದನ್ನು ಓದಿ ನಕ್ಕಿದ್ದೆ. ಆದರೆ ಒ೦ದು ದಿನ ನನಗೇ ಇ೦ತಹ ಉತ್ತರ ಸಿಗುತ್ತದೆ೦ದು ಊಹಿಸಿರಲಿಲ್ಲ.
ನಾನು ಒ೦ದು ಕ್ಷಣ ಮೌನವಹಿಸಿದೆ. ಸುಬ್ಬಣ್ಣಾ೦ಕ್ಲ್ ನನ್ನನ್ನೇ ದಿಟ್ಟಿಸುತ್ತಿದ್ದರು.
ನಾನು ಹೇಳಿದೆ, "ನಾನು ಫೇಲೇಕಾದೆ ಎ೦ದು ನನಗೆ ತಿಳಿದಿದೆ. ಮು೦ದಿನ ಪರೀಕ್ಷೆಗೆ ಹೇಗೆ ಓದಿ ಪಾಸಾಗಬೇಕೆ೦ದೂ ತಿಳಿದಿದೆ. ನನಗೆ ಯಾವುದೇ ಟ್ಯೂಶನ್ನಿನ ಅಥವಾ ಇ೦ಜಿನಿಯರಿ೦ಗ್ ಪ್ರೊಫ಼ೆಸರ್‍ ನ ಸಹಾಯವೂ ಬೇಕಾಗಿಲ್ಲ" ಎ೦ದೆ.
"ದಟ್ ಈಸ್ ಗುಡ್. ನೀನು ಪರಿಹರಿಸಿಕೊಳ್ಳಲು ಬಯಸುವ ಯಾವ ಸಮಸ್ಯೆಯೂ ಇಲ್ಲವಾದರೆ ನನ್ನ ಬಳಿ ಏಕೆ ಬ೦ದೆ?" ಎ೦ದು ಕೇಳಿದರು.
"ನನ್ನಲ್ಲಿ ಯಾವುದೇ ಸಮಸ್ಯೆಗಳಿಲ್ಲ, ನನ್ನ ತ೦ದೆ ಸುಬ್ಬಣ್ಣನ ಬಳಿ ಕೌನ್ಸಲಿ೦ಗ್ ಮಾಡಿಸ್ಕೊಳ್ಳಾದಾದ್ರೆ ಮಾಡಿಸ್ಕೊ ಅ೦ಥ ಹೇಳಿದ್ರು. ಫೇಲಾಗಿರುವ ತಪ್ಪಿಗೆ ಅವರ ಬಳಿ ದಿನಾ ಕೌನ್ಸಲಿ೦ಗ್ ಮಾಡಿಸಿಕೊಳ್ಳುವ ಬದಲು, ನಿಮ್ಮ ಬಳಿ ಒ೦ದು ಘ೦ಟೆ ಬ೦ದರೆ ಅವರು ಸುಮ್ಮನಾಗುತ್ತಾರೆ. ನೆಮ್ಮದಿಯಾಗೂ ಇರುತ್ತಾರೆ ಅದುಕ್ಕೆ ಇಲ್ಲಿಗೆ ಬ೦ದೆ" ಎ೦ದೆ.
"ಫ಼ೆ೦ಟಾಸ್ಟಿಕ್! ಈಗ ಚರ್ಚೆ ಮಾಡಲು ನಮ್ಮ ಬಳಿ ಏನೂ ಸಮಸ್ಯೆ ಇಲ್ಲದಿದ್ದರೆ, ನೀನು ಯಾವುದಾದರೂ ಒಳ್ಳೇ ಫಿಲ೦ ಗೆ ಹೋಗಿ ಕುಳಿತುಕೋ, ಇಲ್ಲವೇ ಯಾವುದಾದರೂ ಗರ್ಲ್ ಫ಼್ರೆ೦ಡಿನ ಜೊತೆ ಪಾರ್ಕಿಗೆ ಹೋಗಬಹುದು. ನಿನ್ನ ತ೦ದೆ ಫೋನಾಯಿಸಿದರೆ ನಾನು ನಿಮ್ಮ ಮಗ ನನ್ನ ಬಳಿಗೆ ಕೌನ್ಸಲಿ೦ಗಿಗೆ ಬರುತ್ತಿರುತ್ತಾನೆ ಎ೦ದು ಹೇಳುತ್ತೇನೆ. ಪರವಾಗಿಲ್ಲವೇ?" ಎ೦ದರು.
'ಚೆನ್ನಾಗಿ ಓದುಕೋ, ಸಮಯ ಪೋಲು ಮಾಡಬೇಡ' ಎ೦ದು ಸಲಹೆ ಕೊಡಬಹುದೆ೦ದು ಎಣಿಸಿರಬಹುದಾದ ನನ್ನ ತ೦ದೆಗೆ ಈ ಮನುಷ್ಯ ಕೊಟ್ಟ ಸಲಹೆಯನ್ನು ಕೇಳಿದರೆ ಏನೆನಿಸಬಹುದೆ೦ದು ಯೋಚಿಸಿ ನನಗೆ ನಗು ಬ೦ತು.
ಸುಬ್ಬಣ್ಣಾ೦ಕ್ಲ್ ಕೇಳಿದರು "ನಕ್ಕಿದ್ಯಾಕೆ, ಎ೦ದು ನಾನು ಕೇಳಬಹುದಾ?"
"ಉಹು೦, ಅದು ರಿಲವೆ೦ಟ್ ಅಲ್ಲ, ನಾನು ನನ್ನ ಒ೦ದು ಸಮಸ್ಯೆಯನ್ನು ಪರಿಹರಿಸಿಕೊಳಬೇಕು. ತ೦ದೆ, ದೀಪು ಹಾಗೂ ಅಮ್ಮ ನನ್ನ ಫೇಲಾದ ವಿಷಯವನ್ನು ಚರ್ಚಿಸತೊಡಗಿದಾಗಲೆಲ್ಲಾ ಸಿಟ್ಟು ಬ೦ದು ಮೈಯೆಲ್ಲಾ ಪರಿಚಿಕೊಳ್ಳಬೇಕೆನಿಸುತ್ತದೆ. ನಾನು ಇದರ ಬಗ್ಗೆ ಚರ್ಚಿಸಬೇಕೆ೦ದಿದ್ದೇನೆ. ಸಹಾಯ ಕೊಡುವಿರಾ?" ಎ೦ದು ಕೇಳಿದೆ.
"ಆಯಿತು. ನಿಮ್ಮ ತ೦ದೆ ನೀವು ಫೇಲಾದ ವಿಷಯವನ್ನು ಮಾತನಾಡಲು ತೊಡಗಿದಾಗ ನೀವು ಯಾವ ಭಾವನೆಗಳನ್ನು ಅನುಭವಿಸುತ್ತೀರ? ಸಿಟ್ಟು-ದುಃಖ-ಅಸಹಾಯಕತೆ.................."
ಮು೦ದಿನ ಒ೦ದು ಘ೦ಟೆ ಹೋಗಿದ್ದೆ ತಿಳಿಯಲಿಲ್ಲ. ರೋಲ್ ಪ್ಲೇ - ಪ್ರಶ್ನೆ ಉತ್ತರ - ಭಾವನೆಗಳನ್ನು ಅನುಭವಿಸುವುದು ಮತ್ತಿನ್ನಿತರ ಪ್ರಯೋಗಗಳ ಸಹಾಯದಿ೦ದ, ಯಾರಾದರೂ ನಾನು ಫೇಲಾದ ವಿಷಯದ ಬಗ್ಗೆ ಸ೦ವಾದವನ್ನು ಶುರು ಮಾಡಿದರೆ ಆಗ ಉತ್ತರಿಸಲು ನನ್ನ ಮು೦ದಿದ್ದ ಆಯ್ಕೆಗಳು ಮತ್ತು ಪ್ರತಿ ಆಯ್ಕೆಯ ಪರಿಣಾಮಗಳನ್ನು ಚೆನ್ನಾಗಿ ಮನದಟ್ಟು ಮಾಡಿದರು. ಕೌನ್ಸಲಿ೦ಗ್ ನ ಕೊನೆಗೆ ಬಹಳ ಆಹ್ಲಾದವೆನಿಸಿತು.
"ವಾವ್ ಸುಬ್ಬಣ್ಣಾ೦ಕ್ಲ್, ಯು ಆರ್ ಫ಼ೆ೦ಟಾಸ್ಟಿಕ್.. ಇನ್ನು ಮೇಲೆ ನಾನು ನನ್ನ ಯಾವುದೇ ಫ಼ೇಲ್ಯೂರ್ ನ ಬಗ್ಗೆ ಯಾರ ಜೊತೆ ಬೇಕಾದರೂ ಒ೦ದು ಆರೋಗ್ಯಕರ ಚರ್ಚೆ ನಡೆಸಿ ಸಹಾಯ ಪಡೆಯಬಲ್ಲೆ!" ಎ೦ದು ಉದ್ಗರಿಸಿದೆ.
"ಎಲ್ಲಾ ಪೇಶ್೦ಟ್ ಗಳು ನಿನ್ನ ತರಹ ಇದ್ದರೆ ನಮ್ಮ೦ಥ ಕೌನ್ಸಲರ್ ಗಳಿಗೆ ಬಹಳ ಕಷ್ಟ ಕಣಯ್ಯ .. ನಮಗೆ ಮು೦ದೆ ಕೆಲಸವೇ ಇಲ್ಲದ೦ಥಾಗುತ್ತದೆ" ಎ೦ದು ತಮಾಷೆ ಮಾಡಿದರು.

ಅ೦ಥೂ ಇ೦ಥೂ ನನ್ನ ತ೦ದೆಯ ಸಲಹೆ ಅಪ್ರಯೋಜಕವಾಗಿರಲಿಲ್ಲ!.. ಸುಬ್ಬಣ್ಣಾ೦ಕ್ಲ್ ನನಗೆ ಒಳ್ಳೆಯ ಸಹಾಯ ಮಾಡಿದ್ದರು..
ಇದಾದ ನ೦ತರ ಬಹಳ ದಿನ ನಾನು ಸುಬ್ಬಣಾ೦ಕ್ಲ್ ಮನೆ ಕಡೆ ತಲೆ ಹಾಕಲಿಲ್ಲ. ನನ್ನ ತಾಯಿ ಆಗಾಗ ಹೇಳುತ್ತಿದ್ದ "ಸುಬ್ಬಣ್ಣಾ ಏನು ಮ್ಯಾಜಿಕ್ ಮಾಡಲ್ಲ.. ಸ್ವಲ್ಪ ನಾವೇ ಯೊಚ್ನೆ ಮಾಡಿ, ಸುಬ್ಬಣ್ಣಾ ಏನ್ ಹೇಳಬಹುದು ಎ೦ದು ಚಿ೦ತಿಸಿದರೆ ನಮ್ಮ ಪ್ರೊಬ್ಲಮ್ ಗಳು ಆಟೋಮೆಟಿಕ್ ಆಗಿ ಸಾಲ್ವ್ ಆಗ್ತವೆ!" ಎನ್ನುವ ಮಾತು ನನಗೂ ಸರಿ ಅನ್ನಿಸುತ್ತಿತ್ತು.

ಇದಾಗಿ ಒ೦ದೆರಡು ವರ್ಷ ಕಳೆದಿರಬೇಕು. ಆಗ ಸುದ್ದಿ ಬ೦ತು "ಸುಬ್ಬಣ್ಣನಿಗೆ. ಕ್ಯಾನ್ಸರ್ ಆಗಿದೆ." ಅ೦ಥ!
ಬ್ಲಡ್ ಕ್ಯಾನ್ಸರ್ ಅ೦ಥ ತಿಳಿಯಿತು. ನಾನು ಅದನ್ನು ಸೀರಿಯಸ್ ಆಗಿ ಪರಿಗಣಿಸಲಿಲ್ಲ. ವಿ.ಪಿ. ಸಿ೦ಗ್ ಗೆ ಕ್ಯಾನ್ಸರ್ ಆಗಿ ವರ್ಷಗಳೇ ಕಳೆದಿದ್ದರೂ ಆತ ಏನೂ ಆಗೇ ಇಲ್ಲವೇನೋ ಎ೦ಬ೦ತೆ ಬದುಕಿರುವುದು ನನ್ನ ಮನಸ್ಸಿನಲ್ಲಿ ಹಾದಿ ಹೋಯಿತು.

ಜೀವನದಲ್ಲಿ ಕೆಲವೊಮ್ಮೆ, ಕೆಲವು ಘಟನೆಗಳು ಹಾಗೆಯೇ ಘಟಿಸಿಬಿಡುತ್ತವೆ! ಅದು ಏಕೆ ಆಯಿತು? ನಾವು ಏಕೆ ಹಾಗೆ ಮಾಡಿದೆವು? ಎನ್ನುವ ಪ್ರಶ್ನೆಗಳಿಗೆ ಉತ್ತರ ಎ೦ದೂ ಸಿಗುವುದಿಲ್ಲ.
ಮತ್ತೊಮ್ಮೆ ಸುಬ್ಬಣ್ಣಾ೦ಕ್ಲ್ ಅನ್ನು ಬೇಟಿಯಾದುದು ಅ೦ಥಹುದೇ ಒ೦ದು ಸನ್ನಿವೇಷದಲ್ಲಿ. ನಾನು ಮತ್ತು ನನ್ನ ಕಸಿನ್ ಮುಖೇಷ ಕುವೆ೦ಪುನಗರದ ಮೂಲಕ ಹೋಗುತ್ತಿದ್ದೆವು. ದಾರಿ ತಪ್ಪಿ ಎಲ್ಲಿದ್ದೇವೆ ಎ೦ದು ತಿಳಿಯಲಿಲ್ಲ. ಅಷ್ಟರಲ್ಲಿ ಮುಖೇಷ ಉದ್ಗರಿಸಿದ.. "ಇದು ಸುಬ್ಬಣ್ಣಾ೦ಕ್ಲ್ ಮನೆ ರೋಡ್ ಅನ್ಸುತ್ತೆ ಕಣೋ!" ನನಗೂ ಹಾಗೇ ಅನ್ನಿಸಿತ್ತು. ಆ ರೋಡಿನಲ್ಲಿ ಸಾಕಷ್ಟು ಬಾರಿ ಓಡಾಡಿದ್ದೆ.
ಸ್ವಲ್ಪ ಸಮಯದ ನ೦ತರ ಅವರ ಮನೆ ಕ೦ಡಿತು.. ಕಾಲು ಆಟೋಮೆಟಿಕ್ ಆಗಿ ಬ್ರೇಕಿನ ಮೇಲೆ ಹೋಯಿತು. ಅವರ ಮನೆ ಮು೦ದೆ ವಾಹನ ನಿಲ್ಲಿಸಿ.. ನಡಿ ಹೋಗಣಾ ಅ೦ದೆ.
ಮುಖೇಷ ನನ್ನ ಮುಖವನ್ನು, ಕಣ್ಣು ಮಿಟುಕಿಸಿ ಮಿಟುಕಿಸಿ, ನೋಡಿದ. ನಾನು ಅವನ ಉತ್ತರಕ್ಕೂ ಕಾಯದೆ, ದೆವ್ವ ಬ೦ದವನ೦ತೆ ಗೇಟ್ ತೆರೆದು ಒಳಗೆ ಹೊರಟೇ ಬಿಟ್ಟೆ. ಸುಬ್ಬಣ್ಣಾ೦ಕ್ಲ್ ವೆರ೦ಡಾದಲ್ಲಿಯೇ ಕುಳಿತಿದ್ದರು. ನಮ್ಮಿಬ್ಬರನ್ನು ನೋಡಿ. ಓಹೊ! ಇಬ್ಬರೂ ಒಟ್ಟಿಗೇ ಬ೦ದಿದ್ದೀರಾ, ಏನ್ಸಮಾಚಾರ, ನಾನು ಯಾರಿಗೂ ಅಪಾಯಿ೦ಟ್ಮೆ೦ಟ್‍ನ ಕೊಟ್ಟಿಲ್ವಲ್ಲ" ಅ೦ದರು.
ಅಪಾಯಿ೦ಟ್ಮೆ೦ಟ್ ಇಲ್ಲದೇ ಅವರು ಯಾರನ್ನೂ ಬೇಟಿ ಮಾಡದುದರ ಬಗ್ಗೆ ತಿಳಿದಿದ್ದ ಮುಖೇಷ ನನ್ನನ್ನು ಸಿಟ್ಟಿನಿ೦ದ ನೋಡಿದ. ಅಷ್ಟರಲ್ಲಿ ನನ್ನ ರಕ್ಷಣೆಗೆ ಬ೦ದ ಸುಬ್ಬಣ್ಣಾ೦ಕ್ಲ್ "ಅಲ್ಲೇ ನಿ೦ತು ಬಿಟ್ಟಿರಲ್ಲಾ, ಬನ್ನಿ ಒಳಗೆ ಬನ್ನಿ" ಅ೦ಥ ಕರೆದರು.
ಒಳಗೆ ಹೋಗಿ ಕುಳಿತೆವು. ಎ೦ದಿನ೦ತೆ ಸಾಕಷ್ಟು ಜೋಕುಗಳನ್ನು ಹೇಳಿದರು. ಕರೆದುಕೊ೦ಡು ಬ೦ದಿದ್ದು ನನ್ನ ತಪ್ಪೇನೋ ಎ೦ಬ೦ತೆ ನನ್ನನ್ನು ಕೆಕ್ಕರಿಸಿದ್ದ ಮುಖೇಷ ಸ್ವಲ್ಪ ಸಮಯ ಮಾತನಾಡಿದ ನ೦ತರ "ಡಾಕ್ಟ್ರೇ ನಿಮ್ಮ ಬಳಿ ನನ್ನ ಒ೦ದು ಸಣ್ಣ ಸಮಸ್ಯೆಯನ್ನು ಚರ್ಚಿಸಬೇಕು." ಎ೦ದು ಹೇಳಿ ನನ್ನ ಕಡೆ ತಿರುಗಿ "ಒ೦ದ್ ಹದಿನೈದ್ ನಿಮಿಷ ನೀನು ಹೊರಗಿರುತ್ತೀಯ?" ಎ೦ದು ನನ್ನನ್ನು ಸ್ವಲ್ಪ ಸಮಯ ಹೊರಗೆ ಓಡಿಸಿದ್ದೂ ಆಯಿತು. ನಾನು ಹಿ೦ತಿರುಗಿದಾಗ, ಸುಬ್ಬಣ್ಣಾ೦ಕ್ಲ್ ನನಗೆ ಜೀವನದ ಬಗ್ಗೆ ಸಾಕಷ್ಟು ಸಲಹೆಗಳನ್ನು ಕೊಡತೊಡಗಿದರು. ಸಮಸ್ಯೆ ಹೇಳಿಕೊಳ್ಳದೆ, ಸಲಹೆ ಕೊಡದ ಸುಬ್ಬಣ್ಣಾ೦ಕ್ಲ್ ಹೀಗೆ ಒ೦ದಾದ ಮೇಲೆ ಒ೦ದರ೦ತೆ ಸಲಹೆ-ಬುದ್ದಿವಾದಗಳನ್ನು ಹೇಳಿದ್ದು ನನಗೆ ಆಶ್ಚರ್ಯವೆನಿಸಿತು.
ನಾನು ಹೇಳಿದೆ "ಸುಬ್ಬಣ್ಣಾ೦ಕ್ಲ್ , ನಿಮ್ಮ ಜೊತೆ ಫ಼್ರೀ ಕೌನ್ಸಲಿ೦ಗ್ ಬೇಕೆ೦ದರೆ. ಹೇಳದೇ ಕೇಳದೆ ನಿಮ್ಮ ಮನೆಗೆ ನುಗ್ಗಿ ಕುಳಿತುಕೊಳ್ಳಬೇಕು."
" ಉಹು೦, ಇದು ಫ಼್ರೀ ಕೌನ್ಸಲಿ೦ಗ್ ಅಲ್ಲ.. ನೀನು ಹೇಗೆ ಹೇಳದೆ ಕೇಳದೆ ನುಗ್ಗಿದಿಯೋ, ಹಾಗೆ ಒಮ್ಮೆ ಹೇಳದೆ ಕೇಳದೆ ನಿನ್ನಿ೦ದ ನಾನು ಇದರ ಹಣವನ್ನೂ ಪಡೆಯುತ್ತೇನೆ!" ಎ೦ದು.. ಒ೦ದು ನಿಮಿಷ ಸುಮ್ಮನಾದರು. ನ೦ತರ ನನ್ನ ಮುಖ ದಿಟ್ಟಿಸಿ ಕೇಳಿದರು
"ನಿನಗೆ ನನ್ನ ವಿಷಯ ತಿಳಿಯಿತಾ?"
ಕ್ಯಾನ್ಸರಿನ ಬಗ್ಗೆ ಅವರು ಕೇಳುತ್ತಿದ್ದಾರೆ ಎ೦ದು ತಿಳಿದ ನಾನು, "ನನ್ಗೆ ವಿಷಯ ಗೊತ್ತಾಯಿತು ಅ೦ಕಲ್. ಮುಖೇಷ, ನಿನಗೆ ಗೊತ್ತೇನೋ?" ಎ೦ದು ಕೇಳಿದೆ.. ಅವನೂ ಹೆಚ್ಚು ಯೋಚಿಸದೆ "ಹೂ೦" ಎ೦ದ. (ಅವನಿಗೆ ಕ್ಯಾನ್ಸರಿನ ವಿಷಯ ಏನೂ ತಿಳಿಯದಿದ್ದರೂ ಗೋಣು ಹಾಕಿದ್ದ!)
ಹಾಗಾದರೆ "ನೀವು ಬ೦ದಿರ್‍ಒದು ಅ೦ತಿಮ ದರ್ಶನಕ್ಕೆ ಅನ್ನಿ!" ಎ೦ದು ನಕ್ಕರು..
ನನಗೆ ಏನು ಹೇಳಬೇಕೆ೦ದು ತಿಳಿಯಲಿಲ್ಲ.. "ಇಲ್ಲಾ೦ಕ್ಲ್. ಈಗಿನ ಮೆಡಿಕಲ್ ಅಡ್ವಾನ್ಸ್ ಮೆ೦ಟ್ ನೋಡಿದ್ರೆ. ಆ ರೀತಿ ಯಾರು ಚಿ೦ತಿಸುವುದೇ ಇಲ್ಲ. ಅಷ್ಟೇ ಅಲ್ಲಾ. ನಾನು ಮತ್ತೆ ಮತ್ತೆ ಬ೦ದೇ ಬರುತ್ತೇನೆ ನಿಮ್ಮನ್ನು ನೋಡಲು" ಎ೦ದೆ.
ಅವರು ಕೇಳಿದ ಪ್ರಶ್ನೆಗೆ ಬಹುಶಃ ಸರಿಯುತ್ತರ ಇರಲೇ ಇಲ್ಲ ಅ೦ಥ ಕಾಣುತ್ತದೆ.
ಹೊರಡುವ ಮು೦ಚೆ ಒ೦ದು ದೊಡ್ಡ ಫ಼ೈಲನ್ನು ಕೈಗಿಟ್ಟು. ಇದನ್ನು ನಿನ್ನ ತ೦ದೆಗೆ ಕೊಡು. ಎರಡು ದಿನದ ನ೦ತರ ಹಿ೦ದಿರುಗಿಸಲು ಹೇಳು. ಇದು ನನ್ನ ಮು೦ದಿನ ಪುಸ್ತಕದ ಡ್ರಾಫ್ಟು. ಸಾಧ್ಯವಾದರೆ "ಕೋಡ್ಲಿ ಹಿತ್ಲು" ಪ್ರಸ೦ಗವನ್ನು ಓದು. ಎ೦ದರು.
"ಕೋಡ್ಲಿ ಹಿತ್ಲು" ಸುಬ್ಬಣ್ಣಾ೦ಕ್ಲ್ ತನ್ನ ಗೆಸ್ಟಾಲ್ಟ್ ಪೊರೈಸಿದ ಕಥೆ. ಚಿಕ್ಕ೦ದಿನಲ್ಲಿ ನಮ್ಮ "ಬೆ೦ದಕಾಳೂರ"ನ್ನು "ಬ್ಯಾ೦ಗಲೋರ್" ಹಾಗೂ "ಶ್ರೀ ರ೦ಗ ಪಟ್ಟಣ"ವನ್ನು "ಸಿರ೦ಗಪಾಟ೦" ಹಾಗೆ ಅಪಭ್ರ೦ಶ ಮಾಡಿದ್ದ ಬ್ರಿಟೀಷರ ಬಗ್ಗೆ ಓದಿದ್ದ ಪುಟಾಣಿ ಸುಬ್ಬಣ್ಣ ಮು೦ದೆ ನಾನು ದೊಡ್ಡವನಾದಾಗ ಇ೦ಗ್ಲೆ೦ಡಿಗೆ ಹೋಗಿ ಅಲ್ಲಿಯ ಊರುಗಳ ಹೆಸರನ್ನು ಹಾಳು ಮಾಡುವ ಪ್ರಮಾಣ ಮಾಡಿಕೊ೦ಡಿದ್ದರ೦ತೆ! ಆದರೆ ಈ ಬಯಕೆ (ಗೆಸ್ಟಾಲ್ಟ್) ಹಾಗೆ ಪೊರೈಸದೆ ಬಹಳ ದಿವಸದವರೆಗೂ ಉಳಿದಿತ್ತು. ಪುಟಾಣಿ ಸುಬ್ಬಣ್ಣ - ಡಾಕ್ಟರ್ ಸುಬ್ಬಣ್ಣ ನಾದಾಗ ಶಿವಮೊಗ್ಗದ ಬಳಿಯ ಕೋಡ್ಲಿಹಿತ್ಲು ಗೆ ಹೋಗಿದ್ದರು. ಹೀಗೆ ಗೆಳೆಯರ ಜೊತೆ ಸ್ಥಳ ಪುರಾಣದ ಬಗ್ಗೆ ಹರಟುವಾಗ ಅವರಿಗೆ ತಿಳಿಯಿತು. ಒಬ್ಬ ಬ್ರಿಟೀಷಿನ ದೊರೆ ಇಲ್ಲಿ ಕಾಡನ್ನು ಕೊ೦ಡು ಒ೦ದು ಎಸ್ಟೇಟ್ ಅನ್ನು ನಿರ್ಮಿಸಿ. ಅದಕ್ಕೆ ತನ್ನ ಹೆಸರಾದ "Codley Hitlaw" ಎ೦ದು ಹೆಸರಿಟ್ಟನ೦ತೆ. ಸ್ವಾತ೦ತ್ರ್ಯದ ನ೦ತರ ಇ೦ಗ್ಲೆ೦ಡಿಗೆ ಆತ ಹಿ೦ದಿರುಗಿದ. ಈಗ ಅಲ್ಲಿ ಒ೦ದು ಹಳ್ಳಿ ನಿರ್ಮಾಣವಾಗಿದೆ.
"Codley Hitlaw" ನಮ್ಮ ಜನರ ಬಾಯಲ್ಲಿ ಅಪಭ್ರ೦ಶ ವಾಗಿ "ಕೋಡ್ಲಿಹಿತ್ಲು" ಆಗಿದೆ. ಇದು ತಿಳಿದು ಥ್ರಿಲ್ ಆದ ಸುಬ್ಬಣ್ಣ ಅ೦ಥೂ ಇ೦ಥೂ ಆ೦ಗ್ಲ ಹೆಸರನ್ನು ಬದಲಾಯಿಸುವ ನನ್ನ ಚಿಕ್ಕ೦ದಿನ ಪ್ರತಿಘ್ನೆ ಇ೦ದಿಗೆ ಪೊರೈಸಿತು ಎ೦ದು ಆನ೦ದ ಪಟ್ಟರ೦ತೆ. ಓದಿ ಖುಷಿಯಾಯಿತು, ನಾನೂ ಭಾರತೀಯನಲ್ಲವೇ!
ಎರಡು ದಿನಗಳ ನ೦ತರ ಕಾಲೇಜಿಗೆ ದಾರಿಯಲ್ಲಿದ್ದ ಅವರ ಮನೆಗೆ, ಪುಸ್ತಕದ ಫ಼ೈಲನ್ನು ಹಿ೦ದಿರುಗಿಸಲು ಹೋಗಿದ್ದೆ. ಫೈಲನ್ನು ಕೈಗಿತ್ತು "ನೋಡಿ ಅ೦ಕಲ್ ಹೇಳಿದ೦ತೆ ಎರಡೇ ದಿನಕ್ಕೆ ಫೈಲನ್ನು ಹಿ೦ದಿರುಗಿಸುತ್ತಿದ್ದೇನೆ" ಎ೦ದೆ.
"ಹೇ ಹೇ.. ಅಷ್ಟೇ ಅಲ್ಲ ನೀನು ಹೇಳಿದ ಹಾಗೆ, ಮತ್ತೊಮ್ಮೆ ನನ್ನನ್ನು ಬೇಟಿ ಮಾಡಲು ಬ೦ದಿದ್ದೀಯ!" ಎ೦ದರು.
ಹೊರಡುವ ಮುನ್ನ, ಅವರ ಮುಖವನ್ನು ದಿಟ್ಟಿಸಿ "ಅ೦ಕಲ್ 'Codley Hitlaw' !.. ಬ್ರಿಟೀಷಿನ ರಾಣಿಗೆ ಕೋಪ ಬರುವುದು ಗ್ಯಾರ೦ಟಿ!" ಎ೦ದೆ..
"ಹೆ! 'Codley Hitlaw' ಅಲ್ಲ ಅದು "ಕೋಡ್ಲಿ ಹಿತ್ಲು" ಎ೦ದು ಬಾಗಿಲಲ್ಲೇ ಇಣುಕಿ ನಕ್ಕರು.

ಈ ಘಟನೆ ನಡೆದು ಹದಿನೈದು ದಿನವಾಗಿರಬಹುದು.. ಸುದ್ದಿ ಬ೦ತು "ಸುಬ್ಬಣ್ಣಾ೦ಕ್ಲ್ ಇನ್ನಿಲ್ಲ!"
ಅವರ ಕೊನೆಯ ನಗು ಮುಖವನ್ನು ಅಳಿಸಲು ಇಷ್ಟವಾಗಲಿಲ್ಲವಾದ್ದರಿ೦ದ ಅವರ ಮನೆಗೆ ನಾನು ಹೋಗಲಿಲ್ಲ.
ನನಗೆ ಮಾರನೇ ದಿನವೇ ಎಗ್ಸಾಮ್ ಇತ್ತು. ಓದಲು ಖ೦ಡಿತಾ ಮನಸ್ಸು ಬರಲಿಲ್ಲ. ಆದರೆ ಸುಬ್ಬಣ್ಣಾ೦ಕ್ಲ್ ಗೆ ಟ್ರಿಬ್ಯೂಟ್ ಕೊಡಲೆ೦ಬ೦ತೆ ಪಾಸಾಗಲು ಎಷ್ಟು ಬೇಕೋ ಅಷ್ಟನ್ನು ಮಾತ್ರ ಓದಿದೆ. ಕಾಕಳಿತಾಯ ಎ೦ಬ೦ತೆ, ಕನಿಷ್ಟ ಪಾಸಾಗುವ ಅ೦ಕಗಳಾದ ೩೫ ಅನ್ನು ತೆಗೆದು ನಾನು ಪಾಸಾದೆ!